ಕೈಗಾರಿಕಾಕರಣ

ಉತ್ಪಾದನೆಯ ಕಾರ್ಯಕ್ಕೆ ವೈಜ್ಞಾನಿಕ ಮತ್ತು ತಾಂತ್ರಿಕ ತಿಳಿವಳಿಕೆಯ ಅನ್ವಯ; ಶ್ರಮವಿಭಜನೆ, ವಿಶೇಷೀಕರಣ, ಉತ್ಪಾದನೆಯಲ್ಲಿ ಯಾಂತ್ರಿಕ, ರಾಸಾಯನಿಕ ಮತ್ತು ಶಾಕ್ತಿಕ ಸಹಾಯಕಗಳ ಬಳಕೆ (ಇಂಡಸ್ಟ್ರಿಯಲೈಸೇಷನ್), ಸುಧಾರಿತ ಉತ್ಪಾದನ ವಿಧಾನಗಳನ್ನು ಅನುಸರಿಸಿ ಉತ್ಪನ್ನದ ಪ್ರತಿ ಘಟಕಕ್ಕೂ ತಗಲುವ ಉತ್ಪಾದನ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವುದು ಮತ್ತು ಉತ್ಪಾದನೆಯನ್ನು ಹೆಚ್ಚಿಸಿ ಆ ಮೂಲಕ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವುದು ಕೈಗಾರಿಕಾಕರಣದ ಮುಖ್ಯ ಉದ್ದೇಶ. ತಾಂತ್ರಿಕ ಮತ್ತು ವೈಜ್ಞಾನಿಕ ತಿಳಿವಳಿಕೆ ಹೆಚ್ಚಿದಂತೆ ಸುಧಾರಿತ ಉತ್ಪಾದನ ವಿಧಾನಗಳನ್ನು ಅನುಸರಿಸುತ್ತಿರುವುದರಿಂದ ಒಂದು ದಿನವಿಡೀ ಉತ್ಪಾದಿಸುತ್ತಿದ್ದುದನ್ನು ಕೆಲವು ನಿಮಿಷಗಳಲ್ಲಿ ಉತ್ಪಾದಿಸಬಹುದಾಗಿದೆ. ಮಾನವನ ಶಕ್ತಿಗೆ ಮೀರಿದ ಎಷ್ಟೋ ಕೆಲಸಗಳನ್ನು ಯಂತ್ರೋಪಕರಣಗಳ ಸಹಾಯದಿಂದ ಅನಾಯಾಸವಾಗಿ ನಿರ್ವಹಿಸಬಹುದಾಗಿದೆ. 

1750-1825ರ ಅವಧಿಯಲ್ಲಿ ಬ್ರಿಟನ್ನಿನಲ್ಲೂ ಅನಂತರ ಇತರ ದೇಶಗಳಲ್ಲೂ ಉಂಟಾದ ಕೈಗಾರಿಕಾಕ್ರಾಂತಿ ಕೈಗಾರಿಕಾಕರಣಕ್ಕೆ ಪ್ರಮುಖ ಕಾರಣ. ಉಗಿ ಶಕ್ತಿಯ ಬಳಕೆಯನ್ನು ಪ್ರಾರಂಭಿಸಿದಾಗಿನಿಂದ ಯಂತ್ರಗಳ ಬಳಕೆ ಹೆಚ್ಚಿತು. ದೊಡ್ಡ ಕಾರ್ಖಾನೆಗಳು ಸ್ಥಾಪಿತವಾದುವು. ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಸಾಧ್ಯವಾಯಿತು. ಮೊದಲು ಜವಳಿ ಕೈಗಾರಿಕೆ, ಅನಂತರ ಸಾರಿಗೆ, ಬೃಹತ್ ಕೈಗಾರಿಕೆಗಳು-ಹೀಗೆ ಕೈಗಾರಿಕಾಕರಣ ಕೆಲವು ವಿಭಾಗಗಳಲ್ಲಿ ಪ್ರಾರಂಭವಾಗಿ ಅನಂತರ ಇತರ ವಿಭಾಗಗಳಿಗೆ ಹರಡಿತು. ಇಂದು ಯಂತ್ರಗಳ ಬಳಕೆಯಿಂದ ಉತ್ಪಾದನೆಯೇ ವಿರಳ. ಕುಶಲ ಕೈಗಾರಿಕೆಗಳಲ್ಲಿ ಕೂಡ ಯಾವುದಾದರೂ ರೂಪದಲ್ಲಿ ಯಂತ್ರದ ಬಳಕೆ ಸಾಮಾನ್ಯವಾಗಿ ಇದ್ದೇ ಇರುತ್ತದೆ.

ಬ್ರಿಟನ್ನಿನಲ್ಲಿ ಪ್ರಾರಂಭವಾದ ಕೈಗಾರಿಕಾಕರಣ ಅಮೆರಿಕ ಸಂಯುಕ್ತಸಂಸ್ಥಾನ, ಯೂರೋಪ್, ರಷ್ಯ, ಜಪಾನ್‍ಗಳಿಗೆ ಹರಡಿ ಅನಂತರ ಇತರ ರಾಷ್ಟ್ರಗಳನ್ನು ಮುಟ್ಟಿತು. ಯೂರೋಪ್ ಮತ್ತು ಐರೋಪ್ಯ ಮೂಲದ ರಾಷ್ಟ್ರಗಳೇ ಕೈಗಾರಿಕೆಯಲ್ಲಿ ಹೆಚ್ಚಾಗಿ ಮುಂದುವರಿದಿರುವುದು ಕೈಗಾರಿಕಾಕರಣದ ಒಂದು ವಿಶೇಷ ಲಕ್ಷಣ. 1950ರ ದಶಕದವರೆಗೆ ಜಪಾನನ್ನು ಬಿಟ್ಟರೆ ಐರೋಪ್ಯ ಸಂಪರ್ಕವಿಲ್ಲದೆ ಬೇರೆ ಯಾವ ರಾಷ್ಟ್ರವೂ ಕೈಗಾರಕೆಯಲ್ಲಿ ಪ್ರಗತಿ ಸಾಧಿಸಿರಲಿಲ್ಲ. ಇತ್ತೀಚೆಗೆ ಏಷ್ಯ ಮತ್ತು ಇತರ ಖಂಡಗಳ ರಾಷ್ಟ್ರಗಳಲ್ಲೂ ಕೈಗಾರಿಕಾಭಿವೃದ್ಧಿ ಕಂಡುಬರುತ್ತಿದೆ. ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲೂ ಪ್ರಪಂಚದ 2/3 ಭಾಗ ಪ್ರಜಾಸಂಖ್ಯೆ ಕೈಗಾರಿಕಾಕರಣದ ಫಲವನ್ನು ಪಡೆದಿರಲಿಲ್ಲ. ಕೈಗಾರಿಕೆಗಳು ಪ್ರಗತಿಪರವಾಗಿ ಬೆಳೆದ ರಾಷ್ಟ್ರಗಳಲ್ಲಿ ಜೀವನಮಟ್ಟ ಉತ್ತಮಗೊಂಡು ಜನರು ಅದರ ಪ್ರಯೋಜನ ಪಡೆದಿದ್ದರು. ಕೈಗಾರಿಕೆಯಲ್ಲಿ ಹಿಂದುಳಿದ ರಾಷ್ಟ್ರಗಳು ನೇರವಾಗಿ ಅದರ ಫಲವನ್ನು ಪಡೆಯದಿದ್ದರೂ ಕೈಗಾರಿಕೆಯಲ್ಲಿ ಮುಂದುವರಿದ ರಾಷ್ಟ್ರಗಳ ಸಂಪರ್ಕದಿಂದ ಪರೋಕ್ಷವಾಗಿ ಸ್ವಲ್ಪಮಟ್ಟಿಗೆ ಪ್ರಯೋಜನ ಪಡೆದುವು.
ಕೆಲವೇ ರಾಷ್ಟ್ರಗಳು ಕೈಗಾರಿಕಾಕರಣದಲ್ಲಿ ವಿಶೇಷ ಪ್ರಗತಿ ಸಾಧಿಸಲು ಅವಕ್ಕೆ ದೊರಕಿದ ಅನುಕೂಲಪರಿಸ್ಥಿತಿಗಳೇ ಕಾರಣ. ದಕ್ಷರಾದ ಕಾರ್ಮಿಕರು,ಕಚ್ಚಾ ಸಾಮಗ್ರಿಗಳ ಲಭ್ಯತೆ ಮತ್ತು ತಯಾರಾದ ವಸ್ತುಗಳಿಗೆ ಮಾರುಕಟ್ಟೆಯ ಪ್ರಾಪ್ತಿ, ಬಂಡವಾಳ, ವೈಜ್ಞಾನಿಕ ಮತ್ತು ತಾಂತ್ರಿಕ ತಿಳಿವಳಿಕೆಯ ಬೆಳೆವಣಿಗೆ, ಅಭಿವೃದ್ಧಿಗೆ ಸಹಾಯಕವಾಗುವಂಥ ಕೈಗಾರಿಕಾಕರಣ ತ್ವರಿತವಾಗಿ ಮುಂದುವರಿದು ಇತರ ರಾಷ್ಟ್ರಗಳ ಹಿಂದೆ ಬಿದ್ದುವು.

ಹಿಂದುಳಿದ ರಾಷ್ಟ್ರಗಳು ಕೈಗಾರಕಾಕರಣಕ್ಕಾಗಿ ಈ ಶತಮಾನದ ಆದಿಭಾಗದಿಂದಲೂ ಹಾತೊರೆಯುತ್ತಿರುವುದು ಕಂಡುಬರುತ್ತಿದೆ. ಇಪ್ಪತ್ತನೆಯ ಶತಮಾನದ ಮೊದಲ ಮೂರೂವರೆ ದಶಕಗಳಲ್ಲಿ ಕೈಗಾರಿಕಾಕರಣಕ್ಕೆ ಪ್ರೋತ್ಸಾಹ ನೀಡಿದ್ದು ರಾಜಕೀಯ ಕಾರಣಕ್ಕಾಗಿ ಅಥವಾ ರಾಷ್ಟ್ರೀಯ ಮನೋಭಾವದ ಪ್ರಾಬಲ್ಯದ ಪರಿಣಾಮವಾಗಿ, ಫ್ರೆಡರಿಕ್ ಲಿಸ್ಟನ ವಿಚಾರಧಾರೆಯ ಪ್ರಭಾವಕ್ಕೊಳಗಾಗಿ ಅನೇಕ ರಾಷ್ಟ್ರಗಳು ರಾಷ್ಟ್ರೀಯ ಮತ್ತು ರಕ್ಷಣಾ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಕೈಗಾರಿಕಾಕರಣಕ್ಕೆ ಪ್ರೋತ್ಸಾಹ ನೀಡಿದುವು. 1930ರ ದಶಕದಲ್ಲಿ ಕೈಗಾರಿಕಾಕರಣಕ್ಕೆ ಹೊಸ ಉತ್ತೇಜನ ದೊರಕಿತು. ಹೊರದೇಶಗಳಿಂದ ಬರುವ ಕೈಗಾರಿಕಾ ಸರಕುಗಳ ಮೇಲೆ ಸುಂಕ ವಿಧಿಸಿ ಆಮದನ್ನು ತಗ್ಗಿಸಿ ಸ್ವದೇಶೀ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ ಕೈಗಾರಿಕಾಕರಣಕ್ಕೆ ಅನುವು ಮಾಡಲಾಯಿತು.

ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದ ಆದಾಯವನ್ನು ಹೆಚ್ಚಿಸಲು ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಲು ಕೈಗಾರಿಕಾಕರಣ ಅವಶ್ಯಕವೆಂಬ ವಾದಕ್ಕೆ ಹೆಚ್ಚು ಪುರಸ್ಕಾರ ದೊರೆತಿದೆ. ಬಡತನ, ಹಸಿವು, ದಾರಿದ್ರ್ಯಗಳನ್ನು ಹೋಗಲಾಡಿಸುವುದು ಹಿಂದುಳಿದ ರಾಷ್ಟ್ರಗಳ ಮೂಲಭೂತ ಸಮಸ್ಯೆ. ಇವನ್ನು ತೊಡೆದುಹಾಕಲು ರಾಷ್ಟ್ರದಲ್ಲಿ ಉತ್ಪಾದನೆ ಹೆಚ್ಚಬೇಕು. ಅಂದರೆ ರಾಷ್ಟ್ರೀಯ ವರಮಾನ ಹೆಚ್ಚಬೇಕು. ಯಂತ್ರೋಪಕರಣಗಳ ಬಳಕೆ ಹೆಚ್ಚದೆ ಮತ್ತು ಬೃಹತ್ ಕೈಗಾರಿಕೆಗಳ ಬೆಳವಣಿಗೆಯಾಗದೆ ಕೈಗಾರಿಕಾ ಉತ್ಪಾದನೆಯಾಗಲಿ, ಕೃಷಿ ಉತ್ಪಾದನೆಯಾಗಲಿ ಹೆಚ್ಚುವಂತಿಲ್ಲ. ಆದ್ದರಿಂದ ಕೈಗಾರಿಕಾಕರಣವಾಗಬೇಕೆಂಬ ವಾದ ಬೆಳೆಯಿತು.

ಬೆಳೆಯುತ್ತಿರುವ ಜನಸಂಖ್ಯೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಹಿಂದುಳಿದ ರಾಷ್ಟ್ರಗಳ ಒಂದು ದೊಡ್ಡ ಸಮಸ್ಯೆ. ಕೃಷಿ ಕ್ಷೇತ್ರದಲ್ಲೆ ಎಲ್ಲರಿಗೂ ಉದ್ಯೋಗ ದೊರಕುವುದು ಅಸಾಧ್ಯ. ವಾಸ್ತವವಾಗಿ ಕೃಷಿ ಕ್ಷೇತ್ರದಲ್ಲಿ ಈಗ ಕೆಲಸ ಮಾಡುತ್ತಿರುವವರ ಸಂಖ್ಯೆ ಅತಿಯಾಗಿದ್ದು, ಅನೇಕರು ಸಾಕಷ್ಟು ಕೆಲಸವಿಲ್ಲದಿದ್ದರೂ ಆ ಕ್ಷೇತ್ರದಲ್ಲೆ ಉಳಿದಿದ್ದಾರೆ. ಕೃಷಿಯಲ್ಲಿ ತಲಾ ಉತ್ಪಾದನೆ ಹೆಚ್ಚಬೇಕಾದರೆ ಈ ಕ್ಷೇತ್ರದಲ್ಲಿರುವ ಅನೇಕರನ್ನು ಬೇರೆ ಉದ್ಯೋಗ ಕ್ಷೇತ್ರಗಳಿಗೆ ವರ್ಗಾಯಿಸಬೇಕಾದ ಅವಶ್ಯಕತೆಯನ್ನು ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳೂ ಮನಗಂಡಿವೆ. ಕೈಗಾರಿಕಾ ಕ್ಷೇತ್ರವನ್ನು ವಿಸ್ತರಿಸಿ ಹೆಚ್ಚು ಜನರಿಗೆ ಅಲ್ಲಿ ಉದ್ಯೋಗಾವಕಾಶ ದೊರಕುವಂತೆ ಮಾಡಬೇಕಾಗಿರುವುದರಿಂದ ಕೈಗಾರಿಕಾಕರಣ ಅವಶ್ಯಕವೆಂಬ ವಾದಕ್ಕೆ ಈಚೆಗೆ ಹೆಚ್ಚು ಮಾನ್ಯತೆ ಲಭ್ಯವಾಗಿದೆ.
ಕೃಷಿ ಅಭಿವೃದ್ಧಿಯಾಗಿ ಆಹಾರದ ಕೊರತೆ ಹೋಗಬೇಕಾದರೆ ಕೈಗಾರಕಾಕರಣ ಅವಶ್ಯಕವೆಂಬುದು ಇನ್ನೊಂದು ವಾದ. ಯಂತ್ರೋಪಕರಣಗಳು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು ಮುಂತಾದವನ್ನು ಕೃಷಿಯಲ್ಲಿ ವ್ಯಾಪಕವಾಗಿ ಬಳಸದಿದ್ದರೆ ಕೃಷಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಇವುಗಳ ಬಳಕೆ ಹೆಚ್ಚಬೇಕಾದರೆ ಇವನ್ನು ಒದಗಿಸುವ ಕೈಗಾರಿಕೆಗಳು ಬೆಳೆಯಬೇಕು. ಕೈಗಾರಿಕಾಕರಣದಲ್ಲಿ ಹಿಂದೆ ಬಿದ್ದಿರುವ ಯಾವ ರಾಷ್ಟ್ರವೂ ಕೃಷಿಯಲ್ಲಿ ಪ್ರಗತಿ ಸಾಧಿಸಿಲ್ಲ. ಆದ್ದರಿಂದ ಕೈಗಾರಿಕಾಕರಣ ಅವಶ್ಯಕವೆಂಬುದು ಈ ವಾದದ ತಿರುಳು.

ಜನಸಂಖ್ಯೆಯ ಸಮಸ್ಯೆಗೆ ಕೈಗಾರಿಕಾಕರಣ ಒಂದು ಪರಿಹಾರ ಎಂಬುದು ಮತ್ತೊಂದು ವಾದ. ಕೈಗಾರಿಕಾಕರಣ ಮುಂದುವರಿದಂತೆ ಜನನದರ ಇಳಿಮುಖವಾಗಿರುವುದು ಕೈಗಾರಿಕೆಯಲ್ಲಿ ಪ್ರಗತಿ ಸಾಧಿಸಿರುವ ಪಾಶ್ಚಾತ್ಯ ರಾಷ್ಟ್ರಗಳ ಅನುಭವ. ಹೀಗಾಗಲು ನಿರ್ದಿಷ್ಟ ಕಾರಣ ಗೊತ್ತಿಲ್ಲ. ನಾಗರಿಕ ಜೀವನವ್ಯವಸ್ಥೆ ಇದಕ್ಕೆ ಕಾರಣವೆಂದು ಹೇಳಬಹುದು. ಕೈಗಾರಿಕಾಕರಣ ಜನನದರವನ್ನು ಇಳಿಮುಖವಾಗುವಂತೆ ಮಾಡುವುದೇನೋ ನಿಜ. ಆದರೆ ಜೀವನಮಟ್ಟ ಉತ್ತಮಗೊಳ್ಳುವುದರಿಂದ, ಔಷಧೋಪಚಾರಗಳ ಅನುಕೂಲ ಹೆಚ್ಚುವುದರಿಂದ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದರಿಂದ ಮರಣದರವೂ ಇಳಿಮುಖಗೊಳ್ಳುತ್ತದೆಂಬ ಅಂಶವನ್ನು ಗಮನಿಸಬೇಕು.

ಮೇಲೆ ಹೇಳಿರುವ ಕಾರಣಗಳಷ್ಟೇ ಅಲ್ಲದೆ, ರಾಷ್ಟ್ರದ ರಕ್ಷಣಬಲವನ್ನು ಹೆಚ್ಚಿಸಿಕೊಳ್ಳಲೂ ಕೈಗಾರಿಕೆಗಳ ಅಭಿವೃದ್ಧಿ ಅವಶ್ಯಕವೆಂಬ ವಾದವಿದೆ. ಕೃಷಿಯನ್ನೇ ಅವಲಂಬಿಸಿರುವ ಯಾವ ರಾಷ್ಟ್ರವೂ ರಕ್ಷಣಬಲವನ್ನು ಹೆಚ್ಚಿಸಿಕೊಳ್ಳಲು ಶಕ್ಯವಾಗಿಲ್ಲವೆಂದು ಹೇಳಬಹುದು.
ಕೈಗಾರಿಕಾಕರಣ ಅವಶ್ಯಕವೆಂಬ ವಾದಕ್ಕೆ ಈ ಶತಮಾನದ ಆದಿಭಾಗದಿಂದಲೂ ಭಾರತದಲ್ಲಿಯೂ ಬೆಂಬಲವಿದೆ. ಬ್ರಿಟಿಷ್ ಸರ್ಕಾರ ಭಾರತದ ಕೈಗಾರಿಕಾಕರಣಕ್ಕೆ ಹೆಚ್ಚು ಗಮನ ಕೊಡದಿದ್ದಾಗ ಹಲವು ರಾಷ್ಟ್ರನಾಯಕರು ಅದರ ನೀತಿಯನ್ನು ಕಟುವಾಗಿ ಟೀಕಿಸಿದರು. ಅದು ಕಚ್ಚಾಸಾಮಗ್ರಿಗಳನ್ನು ಕೊಂಡೊಯ್ದು, ತಯಾರಾದ ವಸ್ತುಗಳನ್ನು ಭಾರತಕ್ಕೆ ವಿಕ್ರಯಿಸಿ ಸ್ವಾರ್ಥವನ್ನು ಸಾಧಿಸಿಕೊಂಡು ಭಾರತದ ಜನರನ್ನು ಶೋಷಿಸುತ್ತಿದೆಯೆಂಬ ವಾದವಿತ್ತು. ಭಾರತದ ಕೈಗಾರಿಕಾಕರಣದ ಸಾಧ್ಯತೆಯನ್ನು ಪರಿಶೀಲಿಸಿ ಸಲಹೆಗಳನ್ನು ನೀಡಲು 1918ರಲ್ಲಿ ಸರ್ಕಾರ ಕೈಗಾರಿಕಾ ಆಯೋಗವೊಂದನ್ನು ನೇಮಿಸಿ ತನಗೂ ಭಾರತದ ಕೈಗಾರಿಕಾಕರಣದಲ್ಲಿ ಆಸಕ್ತಿ ಇದೆ ಎಂದು ತೋರಿಸಿಕೊಳ್ಳಲು ಯತ್ನಿಸಿತು. ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆ 1938ರಲ್ಲಿ ಕೈಗಾರಿಕಾಕರಣದ ಅವಶ್ಯಕತೆಯನ್ನು ಮನಗಂಡು, ಇದಕ್ಕಾಗಿ ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ರೂಪಿಸಬೇಕೆಂದು ತೀರ್ಮಾನಿಸಿತು. ಆದರೆ ರಾಜಕೀಯ ಸ್ವಾತಂತ್ರ್ಯವಿಲ್ಲದ್ದರಿಂದ ಈ ದಿಕ್ಕಿನಲ್ಲಿ ಯಾವ ಪ್ರಗತಿಯನ್ನೂ ಸಾಧಿಸಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯಾನಂತರ, ಪಂಚವಾರ್ಷಿಕ ಯೋಜನೆಗಳ ಮೂಲಕ ಕೈಗಾರಿಕಾಕರಣಕ್ಕೆ ಆದ್ಯತೆ ಕೊಡಲಾಗಿದೆ. ಸ್ವಾತಂತ್ರ್ಯ ಪೂರ್ವಕಾಲದಲ್ಲಿ ಕಂಡರಿಯದ ಎಷ್ಟೋ ಕೈಗಾರಿಕೆಗಳು ಈಗ ಸ್ಥಾಪಿತವಾಗಿ ದೇಶದ ಪ್ರಗತಿಗೆ ಸಹಾಯಕವಾಗಿವೆ.
ಕೈಗಾರಿಕಾಕರಣದಿಂದ ಮಹತ್ವಪೂರ್ಣವಾದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳುಂಟಾಗಿವೆ. ಈ ಬದಲಾವಣೆಗಳಿಂದ ಹಲವಾರು ಅನುಕೂಲತೆಗಳೂ ಹಲವು ಪ್ರತಿಕೂಲಗಳೂ ಉಂಟಾಗಿವೆ. ಅನುಕೂಲಗಳಿವು: 1. ರಾಷ್ಟ್ರದ ಒಟ್ಟು ಉತ್ಪಾದನೆ ಮತ್ತು ಜನರ ತಲಾವರಮಾನ ಹೆಚ್ಚಿ ಜೀವನಮಟ್ಟ ಉತ್ತಮಗೊಂಡಿದೆ. 2. ಮಾನವ ಶಕ್ತಿಯ ಸ್ಥಾನವನ್ನು ಯಂತ್ರಗಳು ಬಹುಮಟ್ಟಿಗೆ ಆಕ್ರಮಿಸಿಕೊಂಡಿರುವುದರಿಂದ ಕೆಲಸಗಾರರ ದೈಹಿಕ ಶ್ರಮ ಕಡಿಮೆಯಾಗಿದೆ. 3 ಕೈಗಾರಿಕೆಗಳು ಸ್ಥಾಪಿತವಾದ ಕಡೆಗಳಲ್ಲೆಲ್ಲ ನಗರಗಳು ಬೆಳೆದು ಜನರಿಗೆ ಜೀವನಸೌಲಭ್ಯಗಳು ಹೆಚ್ಚಾಗಿ ದೊರಕುತ್ತಿವೆ. 4. ಕೈಗಾರಿಕೆಗಳು ಹೆಚ್ಚಿದಂತೆ ಉದ್ಯೋಗಾವಕಾಶಗಳು ಹೆಚ್ಚುವುದರಿಂದ ನಿರುದ್ಯೋಗಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆಯಗಿದೆ. 5. ಕೃಷಿಕ್ಷೇತ್ರದಲ್ಲೂ ಯಾಂತ್ರೀಕರಣ ಸಾಧ್ಯವಾಗಿ ಕೃಷಿಉತ್ಪನ್ನ ಹೆಚ್ಚಾಗಿದೆ. ಪ್ರತಿಕೂಲಗಳಿವು: 1. ದೊಡ್ಡ ಉದ್ಯಮಸಂಸ್ಥೆಗಳ ಬೆಳೆವಣಿಗೆಯಿಂದ ಆರ್ಥಿಕಶಕ್ತಿ ಕೆಲವರಲ್ಲೇ ಕೇಂದ್ರೀಕೃತವಾಗಿದೆ. ಸಮಾಜದಲ್ಲಿ ಆರ್ಥಿಕ ಅಸಮತೆ ಹೆಚ್ಚಾಗಿದೆ. 2. ಬಂಡವಾಳಗಾರರು, ಕಾರ್ಮಿಕರು ಎಂಬ ವರ್ಗಗಳು ಹುಟ್ಟಿಕೊಂಡಿವೆ. ಕಾರ್ಮಿಕರನ್ನು ಶೋಷಣೆಮಾಡಿ ತಮ್ಮ ಲಾಭಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಬಂಡವಾಳಗಾರರು ಹವಣಿಸುತ್ತಾರೆ. ಆದರೆ ಕಾರ್ಮಿಕರಿಗೆ ತಮ್ಮ ಹಕ್ಕುಬಾಧ್ಯತೆಗಳ ಅರಿವುಂಟಾಗಿ ಅವರೆಲ್ಲರೂ ಸಂಘಟಿತರಾಗಿ ಬಂಡವಾಳಗಾರರ ಶೋಷಣೆಯಿಂದ ತಪ್ಪಿಸಿಕೊಳ್ಳಲು ಹೋರಾಡುತ್ತಾರೆ. ಹೀಗೆ ಕೈಗಾರಿಕಾ ಕೇಂದ್ರಗಳಲ್ಲಿ ಎಷ್ಟೋಬಾರಿ ಗೊಂದಲಮಯ ಪರಿಸ್ಥಿತಿ ಉಂಟಾಗುತ್ತದೆ. 3. ಕೈಗಾರಿಕೆಗಳು ಕೇಂದ್ರೀಕೃತವಾಗಿರುವ ನಗರಗಳಲ್ಲಿ ಸಾಕಷ್ಟು ವಸತಿ ಸೌಕರ್ಯಗಳಿಲ್ಲದಿರುವುದು, ಕೊಳಚೆ ಪ್ರದೇಶಗಳ ಬೆಳೆವಣಿಗೆ, ನೀರು ಮತ್ತು ಗಾಳಿ ಕಲುಷಿತಗೊಂಡು ಜನರ ಆರೋಗ್ಯಕ್ಕೆ ಹಾನಿಯುಂಟಾಗುವುದು ಮುಂತಾದ ತೊಂದರೆಗಳಿವೆ. ಇವೆಲ್ಲ ಕೈಗಾರಿಕಾಕರಣದ ಫಲ. 4. ಮನುಷ್ಯ ಯಂತ್ರಗಳಿಗೆ ದಾಸನಾಗಿರುವುದು ಮತ್ತು ಐಶ್ವರ್ಯಗಳಿಕೆಯೇ ಸರ್ವಸ್ವವೆಂದು ಭಾವಿಸಿ ಮಾನವೀಯ ಮೌಲ್ಯಗಳನ್ನು ಕಡೆಗಣಿಸುವ ಪ್ರವೃತ್ತಿ ಹೆಚ್ಚುತ್ತಿರುವುದು-ಇವೆಲ್ಲ ಕೈಗಾರಿಕಾಕರಣದ ಫಲವೆಂದು ಗಾಂಧೀಜಿಯವರು ಭಾವಿಸಿ, ಕೈಗಾರಿಕಾಕರಣಕ್ಕೆ ಪ್ರಾಮುಖ್ಯ ನೀಡುವುದನ್ನು ವಿರೋಧಿಸಿದರು.

ಕೈಗಾರಿಕಾಕರಣದಿಂದ ಕೆಟ್ಟ ಪರಿಣಾಮಗಳುಂಟಾಗಿರುವುದು ನಿಜ. ಆದರೆ ಕೈಗಾರಿಕಾಕರಣದ ಪ್ರಾಮುಖ್ಯವನ್ನು ಕಡೆಗಣಿಸುವಂತಿಲ್ಲ. ಸೂಕ್ತ ಕ್ರಮಗಳನ್ನು ಕೈಗೊಂಡು ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿ ಕೈಗಾರಿಕಾಕರಣದಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳುವ ಕಡೆಗೆ ಗಮನ ಕೊಡುವುದು ಅವಶ್ಯಕ. ಅದಕ್ಕಾಗಿ ಎಲ್ಲ ದೇಶಗಳಲ್ಲೂ ನಾನಾ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.      
	(ಬಿ.ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ